ಜನಪದ ನಿರುಕ್ತಿ -
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಊರು ಕೇರಿ, ನದಿ ಬೆಟ್ಟ ಗುಡ್ಡ, ಕೆರೆ ಕಾಲುವೆ ಮುಂತಾದವುಗಳ ಹೆಸರುಗಳ ಬಗ್ಗೆ ಸಾಮಾನ್ಯ ಜನ ಕೊಡುವ ವಿವರಗಳಿಗೆ ಜನಪದ ನಿರುಕ್ತಿ (ಫೋಕ್ ಎಟಿಮಾಲಜಿ) ಎಂಬ ಹೆಸರಿದೆ. ತಾವು ಕೊಡುವ ಪ್ರತಿಯೊಂದು ವಿವರಕ್ಕೂ ಪುರಾಣ, ಇತಿಹಾಸ ಇಲ್ಲವೆ ಐತಿಹ್ಯದ ಆಧಾರವನ್ನು ಕಲ್ಪಿಸುವುದು ಇಲ್ಲಿನ ವಾಡಿಕೆ. ಪದಗಳಿಗೆ ನಿಜವಾದ ನಿಷ್ಪತ್ತಿ ತಿಳಿಯದಿದ್ದಾಗ, ಅವುಗಳ ನಿಷ್ಪತ್ತಿಯನ್ನು ತಪ್ಪು ಗ್ರಹಿಸುವುದು, ಇಲ್ಲವೆ ಸಂಬಂಧವಿರಬಹುದಾದ ಇತರ ಪದಗಳ ಜೊತೆ ತಪ್ಪು ಸಾದೃಶ್ಯ ಕಲ್ಪಿಸುವುದು ಇಲ್ಲಿ ಸಾಮಾನ್ಯ. ಎಷ್ಟೋ ವೇಳೆ ತಮ್ಮ ವಿವರಣೆಗೆ ತಕ್ಕಂತೆ ಜನ ಮೂಲಪದದ ರೂಪವನ್ನೇ ಬದಲಾಯಿಸಿರುವುದುಂಟು. ಪದಗಳ ಈ ಬಗೆಯ ರೂಪಾಂತರಕ್ಕೆ ಕೆಲವು ಕಾರಣಗಳಿವೆ. ಹಳೆಯ ಪದಗಳು ರೂಢಿ ತಪ್ಪಿದಾಗ ಅವುಗಳ ಅರ್ಥ ಬದಲಾವಣೆ ಹೊಂದಬಹುದು ಅಥವಾ ಪದಗಳು ತಾವಾಗಿಯೇ ಬದಲಾವಣೆಗೆ ಒಳಗಾಗಬಹುದು. ಜೊತೆಗೆ ಪರಕೀಯರ ಭಾಷೆ, ಉಡುಪು, ಸಂಪ್ರದಾಯ, ನಡೆವಳಿಗಳ ಬಗ್ಗೆ ಸ್ವಾಭಾವಿಕವಾಗಿಯೇ ಒಂದು ರೀತಿಯ ಹೇವರಿಕೆಯಿರುವುರಿಂದ ಪರಕೀಯ ಭಾಷೆಯನ್ನು ತಪ್ಪು ಉಚ್ಚರಿಸುವುದು ಅಥವಾ ಪದಗಳನ್ನು ಉದ್ದೇಶಪೂರ್ವಕವಾಗಿ ತಿರುಚುವುದು ಸಾಮಾನ್ಯವಾಗಿ ನಡೆಯುತ್ತದೆ. ಎಷ್ಟೋ ವೇಳೆ ತಪ್ಪು ನಿರುಕ್ತಿಗಳು ಸ್ಥಿರವಾಗಲು ಪ್ರಾಚೀನ ಪದಗಳನ್ನು ಕುರಿತಾದ ವಿದ್ವಾಂಸರ ತಪ್ಪು ವ್ಯಾಖ್ಯಾನಗಳೂ ಕಾರಣವಾಗುತ್ತವೆ. ಕೆಲವೊಂದು ತಪ್ಪು ಸಮೀಕರಣದಿಂದ ಪದಗಳ ರೂಪ ಹೀಗೆ ರೂಪಾಂತರಗೊಳ್ಳುವಾಗ ತಪ್ಪು ಸಂಬಂಧ ಮತ್ತು ಸಾದೃಶ್ಯದಿಂದಾಗಿ ಅವುಗಳ ಭಾವ ಕೂಡ ಭ್ರಷ್ಟಗೊಳ್ಳುವುದು ಸಹಜ.

ಜನಪದ ನಿರುಕ್ತಿಯ ಪ್ರಕ್ರಿಯೆಯನ್ನು ವೈದಿಕ ಸಾಹಿತ್ಯದಲ್ಲಿಯೇ ಕಾಣುತ್ತೇವೆ. ಬ್ರಾಹ್ಮಣಗಳಲ್ಲಿ ಹಲವು ಪದಗಳಿಗೆ ಇಂಥ ವ್ಯುತ್ಪತ್ತಿ. ವಿವರಣೆಗಳು ದೊರೆಯುತ್ತವೆ. ಬ್ರಾಹ್ಮಣಗಳ ಸಂಕಲನಕಾರರು ಸಂಪ್ರದಾಯದಲ್ಲಿನ ಪೂರ್ಣ ನಂಬಿಕೆಯಿಂದಾಗಿ, ಜನಪದ ನಿರುಕ್ತಿಯನ್ನೇ ಎತ್ತಿ ಹಿಡಿದರು. ವೈದಿಕ ಪರಂಪರೆಯ ಈ ನಿಷ್ಠೆಯನ್ನು ಯಾಸ್ಕನ ನಿರುಕ್ತದಲ್ಲಿ ಸಾಕಷ್ಟು ಕಾಣಬಹುದು. ಉದಾಹರಣೆಗೆ ಅಗ್ನಿ ಎಂಬ ಪದ. ದೇವತೆಗಳಲ್ಲಿ ಮೊದಲು ಹುಟ್ಟಿದವನಾದ್ದರಿಂದ ಅವನಿಗೆ ಅಗ್ರಿ ಎಂದು ಹೆಸರಾಯಿತು. ಆದರೆ ದೇವತೆಗಳ ರಹಸ್ಯ ಕಾಪಾಡಿದ್ದರಿಂದ ಅವನಿಗೆ ಅಗ್ನಿ ಎಂಬುದಾಗಿ ಹೆಸರು ಬಂತಂತೆ.

ಹಾಗೆಯೇ ಪೌರಾಣಿಕ ಜನಪದ ನಿರುಕ್ತಿಗಳನ್ನೂ ಗುರುತಿಸಬಹುದು. ಜನಪದ ನಿರುಕ್ತಿ ಅನೇಕ ಪದಗಳ ಸುತ್ತ ಅಸಂಖ್ಯಾತ ನಂಬಿಕೆಗಳು ಮತ್ತು ಪುರಾಣಗಳನ್ನು ಸೃಷ್ಟಿಸಿದೆ. ಉದಾಹರಣೆಗೆ ಶಶ ಎಂಬ ಪದ. ಇದರ ಅರ್ಥ ಮೊಲ ಎಂದಿದ್ದರೂ ಇದನ್ನು ಚಂದ್ರನಿಗೂ ಅನ್ವಯಿಸಲಾಯಿತು. ಅನೇಕ ಚಂದ್ರಪುರಾಣಗಳು ಮೊಲದ ಸುತ್ತ ಕಟ್ಟಿದವುಗಳಾಗಿವೆ.

ಪಾಂಡವರ ತಾಯಿಯಾದ ಕುಂತಿಗೆ ಜಾನಪದದಲ್ಲಿ ಕನ್ಯಾಮಾತಾ ಎಂಬ ಅರ್ಥವಿದೆಯಂತೆ.

ಐತಿಹ್ಯಗಳಿಗೂ ಜನಪದ ನಿರುಕ್ತಿಗೂ ನಿಕಟ ಸಂಬಂಧವಿದೆ. ಐತಿಹ್ಯಗಳಲ್ಲೆಲ್ಲ ಸ್ಥಳೀಯ ಐತಿಹ್ಯಗಳು ಜನಪದ ನಿರುಕ್ತಿಗಳಿಂದ ಹೆಚ್ಚು ಪ್ರಭಾವಿತವಾಗಿವೆ. ಇಂಥದಕ್ಕೆ ಪಿರಿಯಾಪಟ್ಟಣದ ಸಮೀಪದಲ್ಲಿರುವ ಮಾಕಲ್ಲಯ್ಯನ ಗುಡ್ಡ ಒಂದು ನಿದರ್ಶನ. ಇದರ ಹಿನ್ನೆಲೆಯಲ್ಲಿ ಸೊಗಸಾದ ಪುರಾಣ ಕಥೆಯೊಂದಿದೆ. ಸೀತಾ ರಾಮಲಕ್ಷ್ಮಣರು ಅರಣ್ಯವಾಸ ಕಾಲದಲ್ಲಿ ದಶರಥನ ಹೆಸರಿನ ಲಿಂಗವೊಂದನ್ನು ಸ್ಥಾಪಿಸಿ, ಪೂಜಿಸುತ್ತಿದ್ದರು. ಇದನ್ನು ಈಗ ದಶರಥೇಶ್ವರ ಎಂದು ಕರೆಯಲಾಗುತ್ತಿದೆ. ಇದು ಅವರಿಗೆ ಕಷ್ಟಕಾಲದಲ್ಲಿ ಎಚ್ಚರಿಕೆ ನೀಡುತ್ತ ಮಾರ್ಗದರ್ಶಿಯಾಗಿತ್ತು. ಹೀಗಿರುವಾಗ ಸಂನ್ಯಾಸಿ ರೂಪದಲ್ಲಿ ಬಂದ ರಾವಣ ಸೀತೆಗೆ ಭಿಕ್ಷೆ ನೀಡಲು ಹೇಳಿದ. ಲಿಂಗದ ಎಚ್ಚರಿಕೆಯನ್ನೂ ಗಮನಿಸದೆ ಸೀತೆ, ಋಷಿಯೆಂದು ತಿಳಿದು ರಾವಣನಿಗೆ ಭಿಕ್ಷೆ ನೀಡಲು ಮುಂದಾದಳು. ಫಲವಾಗಿ ದಶರಥೇಶ್ವರ ಕಲ್ಲಾದನಂತೆ. ರಾವಣನಿಂದ ಸೀತಾಪಹರಣವಾಗುವಾಗ ಸೀತೆ, ಮಾವ ಕಲ್ಲಾದೆಯಾ-ಎಂದು ಕೂಗಿಕೊಂಡಳಂತೆ. ಈಗ 'ಮಾವ ಕಲ್ಲಾದೆಯಾ ರೂಪವೇ ಮಾಕಲ್ಲಯ್ಯ ಆಗಿ. ಆ ಪ್ರದೇಶ ಮಾಕಲ್ಲಯ್ಯ ಗುಡ್ಡ ಎಂದೇ ಪ್ರಸಿದ್ಧವಾಯಿತೆಂದು ಹೇಳುತ್ತಾರೆ.
ಅನೇಕ ಸ್ಥಳ ಮತ್ತು ನದಿಗಳ ಹೆಸರುಗಳ ಮೂಲ ಕೂಡ ಜನಪದ ನಿರುಕ್ತಿಯಂತಿರುವುದು ಗಮನಾರ್ಹ. ಸ್ಥಳದ ಹೆಸರಿಗೆ ಬೆಂಗಳೂರು ಒಳ್ಳೆಯ ಉದಾಹರಣೆ. ಇದು ಬೆಂಗಾಳು ಎಂಬುದರಿಂದ ಬಂದಿದ್ದು, ಇದರ ಹಿಂದೆ ಮಾಗಡಿ ಕೆಂಪೇಗೌಡನಿಗೆ ಸಂಬಂಧಿಸಿದ ಐತಿಹ್ಯವೊಂದಿದೆ. ಈಗ ಬೆಂಗಳೂರು ಇರುವ ಪ್ರದೇಶದಲ್ಲಿ ಒಮ್ಮೆ ಸಂಚಾರ ಹೊರಟ ಕೆಂಪೇಗೌಡನಿಗೆ ತುಂಬ ಹಸಿವಾಯಿತಂತೆ. ಅದೇ ಸಮಯದಲ್ಲಿ ಅವನ ಮನೆದೇವತೆ ಕೆಂಪಮ್ಮ ಬೇಯಿಸಿದ ಕಾಳನ್ನು ಇರಿಸಿಕೊಂಡು ಕುಳಿತಿದ್ದಳು. ಹಸಿದು ಬಂದ ಕೆಂಪೇಗೌಡನಿಗೆ ಆಕೆ ಕಾಳು ಕೊಟ್ಟು, ಆ ಜಾಗದಲ್ಲಿ ಕೋಟೆ ಕಟ್ಟಿಸುವಂತೆ ಸೂಚಿಸಿ ಅದೃಶ್ಯವಾದಳು. ಹಾಗೆ ಕಟ್ಟಿಸಿದ ಊರಿಗೆ ಗೌಡ ಬೆಂದ ಕಾಳಿನ ನೆನಪಿಗಾಗಿ ಬೆಂಗಾಳು ಎಂದು ಹೆಸರಿಟ್ಟನಂತೆ. ಇದಕ್ಕೆ ಊರು ಪದ ಸೇರಿಸಿಕೊಂಡು ಬೆಂಗಾಳೂರು ಆಗಿ ಕ್ರಮೇಣ ಈಗ ಬೆಂಗಳೂರು ಆಗಿ ಈ ಪದ ಮಾರ್ಪಾಡಾಗಿದೆ-ಎಂಬುದಾಗಿ ಜನಜನಿತ ಕಥೆಯೊಂದಿದೆ. ನದಿಯ ಹೆಸರಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ನೇತ್ರಾವತಿಯನ್ನು ನೋಡಬಹುದು. ಹಿರಣ್ಯಾಕ್ಷ ಭೂಮಿಯನ್ನು ಅಪಹರಿಸಿ ಪಾತಾಳ ಲೋಕಕ್ಕೆ ತೆಗೆದುಕೊಂಡು ಹೋದನಷ್ಟೆ. ಆ ಭೂಮಿಯನ್ನು ಹಿಂದಕ್ಕೆ ತರಲು ವಿಷ್ಣು ವರಹಾವತಾರವೆತ್ತಿ ಹಿರಣ್ಯಾಕ್ಷನನ್ನು ಕೊಲ್ಲಬೇಕಾಯಿತು. ಭೂಮಿಯನ್ನು ಸ್ವಸ್ಥಾನದಲ್ಲಿರಿಸಿದ ಮೇಲೆ ವಿಷ್ಣು ವಿಶ್ರಾಂತಿಗಾಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡಾಗ ವರಾಹದ ಎರಡು ಕೋರೆದಾಡೆಗಳೂ ಎರಡು ಬೆಟ್ಟಗಳಿಗೆ ತಾಕಿ ಎರಡು ನದಿಗಳು ಉದ್ಭವವಾದವು. ಅವೇ ತುಂಗ ಮತ್ತು ಭದ್ರ ನದಿಗಳು. ಕೋರೆ ತಾಕಿ ಸಿಡಿದ ಮಣ್ಣು ವರಾಹಮೂರ್ತಿಯ ಕಣ್ಣಿಗೆ ಬಿತ್ತು. ಕೂಡಲೆ ಕಣ್ಣಿನಿಂದ ನೀರು ಚಿಮ್ಮಿತು. ಹೀಗೆ ವಿಷ್ಣುವಿನ ನೇತ್ರದಿಂದ ಚಿಮ್ಮಿದ ನದಿಯೇ ನೇತ್ರಾವತಿ ಎಂದು ಹೆಸರಾಂತಿದೆ.

ಹಾಗೆಯೇ ಸಾಮ್ರಾಜ್ಯಗಳ ಹೆಸರುಗಳಾದ ಕದಂಬ, ಚಾಳುಕ್ಯ, ಹೊಯ್ಸಳ ಮೊದಲಾದವು ಕೂಡ ಐತಿಹ್ಯ ಮೂಲದವಾಗಿದ್ದು ಅವುಗಳ ವಿವರಗಳು ಜನಪದ ನಿರುಕ್ತಿಯಂತೆಯೇ ಇವೆ. 					(ಆರ್.ಜಿ.)